DistrictHaveriLatestUncategorized

ರಾಷ್ಟ್ರೀಯ ಸಮಗ್ರತೆ ಹಾಗೂ ಐಕ್ಯತೆ ಬಲಪಡಿಸಿದಾಗ ಸ್ವಾತಂತ್ಯೋತ್ಸವ ಆಚರಣೆ ಸಾರ್ಥಕವಾಗುತ್ತದೆ: ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ

ಹಾವೇರಿ : ಮಹಾತ್ಮಾ ಗಾಂಧೀಜಿ ಸೇರಿದಂತೆ, ನಮ್ಮ ಹಿರಿಯರು ಬದುಕಿದ ಆದರ್ಶಗಳನ್ನು ಇಂದು ನಾವು ಮೈಗೂಡಿಸಿಕೊಂಡು, ರಾಷ್ಟ್ರೀಯ ಸಮಗ್ರತೆ ಹಾಗೂ ಐಕ್ಯತೆಯನ್ನು ಬಲಪಡಿಸಬೇಕಾಗಿದೆ. ಅಂದಾಗ ಮಾತ್ರ ಇಂದಿನ ಸ್ವಾತಂತ್ರೋತ್ಸವದ ಆಚರಣೆ ಸಾರ್ಥಕವಾಗುತ್ತದೆ ಎಂದು ಜವಳ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ ಅವರು ಹೇಳಿದರು.

ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ 78ನೇ ಸ್ವಾತಂತ್ರೋತ್ಸವ ದಿನಾಚರಣೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ನಮ್ಮ ಹಕ್ಕು, ಅಭಿವೃದ್ಧಿ ನಮ್ಮ ಧೈಯ. ಕೃಷಿ ನಮ್ಮ ಆತ್ಮ, ರೈತ ನಮ್ಮ ಬೆನ್ನೆಲುಬು, ದೇಶ ಕಾಯುವ ಯೋಧ, ದೇಶ ಕಟ್ಟುವ ಯುವ ಜನತೆ ಈ ದೇಶದ ಶಕ್ತಿ ರೂಪಗಳು. ಇವುಗಳ ಜೊತೆಗೆ ಇನ್ನೂ ಅನೇಕ ಸಂಗತಿಗಳು ಈ ನಾಡಿನ ಸಮಗ್ರ ವಿಕಾಸಕ್ಕೆ ಕಾರಣವಾಗಿರುವುದನ್ನು ನಾವು ಮರೆಯುವಂತಿಲ್ಲ. ರಾಜ-ಮಹಾರಾಜರು ಕಟ್ಟಿದ, ಸಾರ್ವಭೌಮರು ಆಳಿದ, ಶರಣರು-ಸಂತರು ಹರಸಿದ, ಕವಿ-ಕಲಾವಿದರು ಹಾಡಿದೆ. ವಿವೇಕಿ-ವಿಜ್ಞಾನಿ-ವಿದ್ವಾಂಸರುಗಳು ರೂಪಿಸಿದ ಈ ದೇಶದ ಆತ್ಮಶಕ್ತಿಯನ್ನು ನಾವು ಅರ್ಥಪೂರ್ಣವಾಗಿ ಮುಂದಿನ ಪೀಳಿಗೆಗೆ ತಲುಪಿಸಬೇಕಾಗಿದೆ ಎಂದರು.

ಆಗಸ್ಟ್ 15, 1947 ಭಾರತೀಯರ ಪಾಲಿಗೆ ಕೇವಲ ಒಂದು ದಿನಾಂಕವೋ ಅಥವಾ ಒಂದು ಇಲ್ಲಿಯೋ ಅಷ್ಟೇ ಅಲ್ಲ, ಅದು 200 ವರ್ಷಗಳ ಕಾಲ ಈ ದೇಶವನ್ನು, ಈ ದೇಶದ ಜನರ ಬದುಕು- ಭಾವನೆಗಳನ್ನು ತಮ್ಮ ಬಿಗಿ ಮುಷ್ಟಿಯಲ್ಲಿ ಇಟ್ಟುಕೊಂಡು ಆಳಿದ ಬ್ರಿಟಿಷರನ್ನು ನಮ್ಮ ನೆಲದಿಂದ ಹೊರಹಾಕಿದ ಸಂಭ್ರಮದ ರೂಪಕವಾಗಿದೆ. ಈ ರೂಪಕ ಸಂಭ್ರಮಾಚರಣೆ 77 ವರ್ಷಗಳನ್ನು ದಾಟಿ 78ನೇ ವರ್ಷಕ್ಕೆ ಕಾಲಟ್ಟಿದೆ. ಇದನ್ನು ಇಡೀ ದೇಶದ ಆತ್ಮಗೌರವವನ್ನು, ಆತ್ಮಾಭಿಮಾನವನ್ನು, ಸ್ವಾತಂತ್ರ್ಯ, ಸಮಾನತೆ, ಸ್ವಾವಲಂಬನೆಯನ್ನು ಮತ್ತು ಹೋರಾಟ, ತ್ಯಾಗ, ಬಲಿದಾನಗಳನ್ನು ನೆನಪು ಮಾಡಿಕೊಳ್ಳುವ ಸಾರ್ಥಕ ಕ್ಷಣವೆಂದೇ ನಾನು ಭಾವಿಸುತ್ತೇನೆ ಎಂದರು.

ಸ್ವಾತಂತ್ರ್ಯ ಹೋರಾಟದಲ್ಲಿ ಈ ದೇಶದೊಂದಿಗೆ ಮತ್ತು ಈ ನಾಡಿನೊಂದಿಗೆ ಹಾವೇರಿ ಜಿಲ್ಲೆಯ ಈ ನೆಲ ಕೂಡ ತನ್ನ ಹೆಜ್ಜೆ ಗುರುತುಗಳನ್ನು ಮೂಡಿಸಿದೆ. ಅಖಂಡ ಧಾರವಾಡ ಜಿಲ್ಲೆಯ ಭಾಗವಾಗಿದ್ದ ಇಂದಿನ ಹಾವೇರಿ ಜಿಲ್ಲೆಯ ಅನೇಕ ಮಹನೀಯರು ಭಾರತ ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಪ್ರಾದೇಶಿಕ ಶಕ್ತಿಯನ್ನು ಮೆರೆದಿದ್ದಾರೆ ಎಂದರು.

ಮೋಟೇಬೆನ್ನೂರಿನ ಮೈಲಾರ ಮಹದೇವಪ್ಪನವರು, ಸಂಗೂರ ಕರಿಯಪ್ಪ, ಮೆಣಸಿನಹಾಳ ತಿಮ್ಮನಗೌಡರು. ಶಿವಪ್ಪ ನೇಸ್ವಿ. ಹೊಸಮನಿ ಸಿದ್ದಪ್ಪ ಸೇರಿದಂತೆ ಅನೇಕ ಸ್ವಾತಂತ್ರ್ಯ ಹೋರಾಟಗಾರರ ಹೆಜ್ಜೆಗುರುತುಗಳು ಭಾರತದ ಸ್ವಾತಂತ್ರ್ಯ ಹೋರಾಟದ ಚರಿತ್ರೆಯಲ್ಲಿ ಅಚ್ಚಳಿಯದೇ ಉಳಿದಿವೆ. ಹಾಗೆಯೇ ಇನ್ನೂ ಅನೇಕ ಮಹನೀಯರು ಇವರೊಂದಿಗೆ ಎಲೆಮರೆಯ ಕಾಯಿಯಂತೆ ಹಗಲಿರುಳು ದುಡಿದಿದ್ದಾರೆ. ಅವರೆಲ್ಲರಿಗೂ ಈ ಶುಭ ಸಂದರ್ಭದಲ್ಲಿ ನಮ್ಮೆಲರ ಕೃತಜ್ಞತೆಗಳು ಸಲ್ಲಲೇಬೇಕಿದೆ.

ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು, ಆದರೆ ಕನಸುಗಳಿಲ್ಲದ ದಾರಿಯಲ್ಲಿ ನಡೆಯಲು ಸಾಧ್ಯವೇ?” ನಮ್ಮ ಸರ್ಕಾರ ಅಭಿವೃದ್ಧಿಯ ಅನೇಕ ಕನಸುಗಳನ್ನು ಕಟ್ಟಿಕೊಂಡಿದೆ. ಅವುಗಳ ಸಾಕಾರಕ್ಕಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ವಿವಿಧ ಇಲಾಖೆಗಳ ಮೂಲಕ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಹಲವು ಕೋಟಿಗಳ ಅನುದಾನವನ್ನು ಬಿಡುಗಡೆಗೊಳಿಸಿದೆ. ರಾಜಕೀಯ ಸ್ವಾತಂತ್ರ್ಯದ ಜೊತೆಯಲ್ಲಿ ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರವನ್ನೂ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವುದೇ ಅರ್ಥಪೂರ್ಣ ಸ್ವಾತಂತ್ರ್ಯಾಚರಣೆ ಎಂದು ನಂಬಿದೆ. ಅಧಿಕಾರ, ಅವಕಾಶ ಮತ್ತು ಸಂಪತ್ತು ಸಮಾಜದ ಎಲ್ಲಾ ಜನರಿಗೂ ಹಾಗೂ ಎಲ್ಲಾ ವರ್ಗಗಳಿಗೂ ಹಂಚಿಕೆಯಾಗಬೇಕೆಂಬುದು ಪ್ರಜಾಪ್ರಭುತ್ವದ ಮೂಲ ಆಶಯ. ಇದು ನಮ್ಮ ಸರ್ಕಾರದ ಧೈಯವೂ ಕೂಡ ಆಗಿದೆ. ಈ ನಿಟ್ಟಿನಲ್ಲಿ ಜನಪರವಾಗಿರುವ ಅನೇಕ ಕಾರ್ಯಕ್ರಮಗಳು ಮತ್ತು ಯೋಜನೆಗಳು ಈ ನಾಡಿನ ಮತ್ತು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಾಕ್ಷಿಯಾಗಿವೆ ಎಂದರು.

ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ನೇತೃತ್ವದ ನಮ್ಮ ಸರ್ಕಾರ ಜಾರಿಗೆ ತಂದ ಗ್ಯರಂಟಿ ಯೋಜನೆಗಳು ರಾಜ್ಯದ ಮತ್ತು ಜಿಲ್ಲೆಯ ಜನತೆಗೆ ಹೊಸ ಚೈತನ್ಯವನ್ನೇ ನೀಡಿವೆ. ನಮ್ಮ ಯೋಜನೆಗಳ ಯಶಸ್ಸಿನ ಪ್ರತಿಫಲವನ್ನು ಸಂತೃಪ್ತ ಜನತೆಯ ಮುಖದಲ್ಲಿ ಸ್ಪಷ್ಟವಾಗಿ ಕಾಣಬಹುದು ಎಂದರು.

ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಜವಾಬ್ದಾರಿ ವಹಿಸಿಕೊಂಡ ನಂತರ ನೆನೆಗುದಿಗೆ ಬಿದ್ದಿದ್ದ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದ ಹಲವಾರು ಯೋಜನೆಗಳನ್ನು ನಿರಂತರವಾಗಿ ಪರಿಶೀಲಿಸಿ. ಅಧಿಕಾರಿಗಳ ಸಭೆ ನಡೆಸಿ, ಅವುಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ ಎಂದರು.

ಹಾವೇರಿ ನಗರದ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ನಗರಾಭಿವೃದ್ಧಿ ಇಲಾಖೆ, ಜಿಲ್ಲಾಡಳಿತ ಮತ್ತು ನಗರಸಭೆಯ ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕರೊಂದಿಗೆ ಹಲವಾರು ಸಭೆಗಳನ್ನು ಮಾಡಲಾಗಿದ್ದು, ಇದೇ ವರ್ಷ ಸಮಸ್ಯೆಗೆ ಪರಿಹಾರ ಕೈಗೊಳ್ಳಲಾಗುವುದು. ಹಾವೇರಿ ನಗರದ ಕುಡಿಯುವ ನೀರು ಪೂರೈಕೆ ಯೋಜನೆಯ ಮೂಲಗಳಾದ ವರದಾ ನದಿ ಮತ್ತು ತುಂಗಭದ್ರಾ ನದಿ ಬೇಸಿಗೆ ದಿನಗಳಲ್ಲಿ ಬತ್ತುವುದರಿಂದ ಉಂಟಾಗುವ ನೀರಿನ ಸಮಸ್ಯೆ ಪರಿಹಾರಕ್ಕೆ ನಗರದ ಮುಲ್ಲಾನ ಕೆರೆ. ಅಕ್ಕಮಹಾದೇವಿ ಹೊಂಡ ಮತ್ತು ದುಂಡಿ ಬಸವೇಶ್ವರ ಕೆರೆಗೆ ನೀರು ಹರಿಸುವ ಯೋಜನೆ ರೂಪಿಸಲಾಗಿದೆ ಎಂದರು.

ಪ್ರಸಕ್ತ ಸಾಲಿನಲ್ಲಿ ಪ್ರಕೃತಿ ವಿಕೋಪದಿಂದ ಜೀವಹಾನಿಯಾದ 8 ಪ್ರಕರಣಗಳಿಗೆ ತಲಾ ರೂ.5 ಲಕ್ಷದಂತೆ ರೂ.40 ಲಕ್ಷ ಪರಿಹಾರ ಪಾವತಿಸಲಾಗಿದೆ. ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಯಾದ ಮನೆಗಳ ಪುನರ್ ನಿರ್ಮಾಣ ಅಥವಾ ದುರಸ್ಥಿ ಕಾರ್ಯಕ್ಕೆ ಹೆಚ್ಚಿನ ಪರಿಹಾರ ಮಾರ್ಗಸೂಚಿಗಳನ್ನು ನಮ್ಮ ಸರ್ಕಾರ ಪ್ರಕಟಿಸಿದೆ. ಸಂಪೂರ್ಣ ಹಾನಿಯಾದ 18 ಮನೆಗಳಿಗೆ ರೂ.21.60 ಲಕ್ಷ ಪರಿಹಾರ ನೀಡುವುದರ ಜೊತೆಗೆ ದೇವರಾಜ ಅರಸು ವಸತಿ ಯೋಜನೆಯಡಿ ಮನೆಯನ್ನು ಸಹ ನೀಡಲಾಗಿದೆ. ಭಾಗಶಃ ಹಾನಿಯಾದ 359 ಮನೆಗಳಿಗೆ ಹೊಸ ಮಾರ್ಗಸೂಚಿ ಪ್ರಕಾರ ರೂ.1.29 ಕೋಟಿ ಪರಿಹಾರ ನೀಡಲಾಗಿದೆ. ಮೃತಪಟ್ಟ 15 ಜಾನುವಾರುಗಳ ಮಾಲೀಕರಿಗೆ ರೂ.1.43 ಲಕ್ಷ ಪರಿಹಾರ ಧನ ನೀಡಲಾಗಿದೆ. ಜಿಲ್ಲೆಯಲ್ಲಿ 3,902 ಹೆಕ್ಟೇರ್ ಕೃಷಿ ಬೆಳೆ ಹಾಗೂ 587 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾದ ವರದಿಯಾಗಿದ್ದು, ಜಂಟಿ ಸಮೀಕ್ಷೆ ನಂತರ ಪರಿಹಾರ ನೀಡಲಾಗಿದೆ ಎಂದರು.

ಪ್ರಕೃತಿಯ ಜೊತೆ ಬದುಕುವ ನಾವುಗಳು ಅದಕ್ಕೆ ಹೊಂದಿಕೊಂಡು ಬದುಕಬೇಕಾದ ಅರಿವನ್ನು ಕಂಡುಕೊಳ್ಳಬೇಕಿದೆ. ಎಷ್ಟೇ ಅತೀವೃಷ್ಟಿ-ಅನಾವೃಷ್ಟಿಗಳು ಎದುರಾದರೂ ಅವುಗಳನ್ನು ಸಮರ್ಥವಾಗಿ ಎದುರಿಸಿದ ಸಂತೃಪ್ತಿ ನಮಗಿದೆ. ಜಿಲ್ಲೆಯ ನೀರಾವರಿ ಯೋಜನೆಗಳು, ಕೃಷಿ, ತೋಟಗಾರಿಕೆ, ಶೈಕ್ಷಣಿಕ, ಆರೋಗ್ಯ ಹಾಗೂ ಕೈಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳ ಸರ್ವಾಂಗೀಣ ಅಭಿವೃದ್ಧಿ ನಮ್ಮ ಸಂಕಲ್ಪವಾಗಿದೆ. ಇದಕ್ಕೆ ಜಿಲ್ಲೆಯ ಮಹಾಜನತೆ ಸಹಕಾರ ಅಗತ್ಯವಾಗಿದೆ ಎಂದರು.

ನಾವು ಸ್ವಾತಂತ್ರ್ಯ ದಿನವನ್ನು ಆಚರಿಸುವ ಜೊತೆಗೆ ನಶಾ ಮುಕ್ತ ಭಾರತ ಅಭಿಯಾನದ ನಾಲ್ಕನೇ ವಾರ್ಷಿಕೋತ್ಸವ ಸಹ ಆಚರಿಸುತ್ತಿದ್ದೇವೆ. ಭಾರತವನ್ನು ಮಾದಕ ದ್ರವ್ಯ ವಸ್ತುಗಳಿಂದ ಮುಕ್ತಗೊಳಿಸುವ ನಮ್ಮ ಸಾಮೂಹಿಕ ಬದ್ಧತೆಯನ್ನು ಸಾಕಾರಗೊಳಿಸುವ ಮೊದಲ ಹೆಜ್ಜೆಯಾಗಿದೆ. 11.22 ಕೋಟಿಗೂ ಹೆಚ್ಚು ಜನರನ್ನು ತಲುಪುವುದರ ಮೂಲಕ ಎನ್.ಎಂ.ಬಿ.ಎ.(ನಶಾ ಮುಕ್ತ ಭಾರತ ಅಭಿಯಾನ) ಒಂದು ಆಂದೋಲನವಾಗಿ ರೂಪುಗೊಂಡಿದೆ ಎಂದರು.

ಆರೋಗ್ಯ: ಜಿಲ್ಲೆಯಲ್ಲಿ ಡೆಂಗೀ ನಿಯಂತ್ರಣಕ್ಕೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಇಲಾಖೆಯಿಂದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯ ಬ್ಯಾಡಗಿ, ಹಾವೇರಿ. ಹಾನಗಲ್ ಹಾಗೂ ಹಿರೇಕೆರೂರ ತಾಲೂಕಿನ ಆಯ್ದ 8 ಗ್ರಾಮಗಳ ಆರೋಗ್ಯ ಮತ್ತು ಕ್ಷೇಮ ಮಂದಿರಗಳ ನೂತನ ಕಟ್ಟಡ ನಿರ್ಮಾಣಕ್ಕೆ ತಲಾ ರೂ.65 ಲಕ್ಷದಂತೆ ರೂ.5.20 ಕೋಟಿ ಮಂಜೂರು ಮಾಡಲಾಗಿದೆ.

ರಾಷ್ಟ್ರೀಯ ಅಂಧತ್ವ ನಿವಾರಣೆಯಂತಹ ಮಹತ್ವದ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಆಶಾ ಕಿರಣ ಯೋಜನೆಯಡಿ ಜಿಲ್ಲೆಯಾದ್ಯಂತ ದೃಷ್ಟಿದೋಷವಿರುವ 10.739 ಶಾಲಾ ಮಕ್ಕಳು ಹಾಗೂ 57,336 ವಯಸ್ಥರರಿಗೆ ಉಚಿತವಾಗಿ ಕನ್ನಡಗಳನ್ನು ವಿತರಣೆ ಮಾಡಲಾಗಿದೆ. ಇದಕ್ಕಾಗಿ ರೂ.4.95 ಕೋಟಿ ಅನುದಾನ ನೀಡಲಾಗಿರುತ್ತದೆ. ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆ ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಕಾರ್ಯಕ್ರಮದಡಿ ಈವರೆಗೆ 3.31 ಲಕ್ಷ ಫಲಾನುಭವಿಗಳು ಯೋಜನೆಯ ಉಪಯೋಗ ಪಡೆದಿದ್ದು, ರೂ.89.66 ಕೋಟಿ ಅನುದಾನವನ್ನು ಬಡಜನರ ಆರೋಗ್ಯಕ್ಕಾಗಿ ಘನವೆತ್ತ ರಾಜ್ಯ ಸರ್ಕಾರ ಪಾವತಿಸಿದೆ.

ಆರ್.ಬಿ.ಎಸ್.ಕೆ. ಕಾರ್ಯಕ್ರಮದಡಿ ವೈದ್ಯಾಧಿಕಾರಿಗಳ ತಂಡಗಳು ಜಿಲ್ಲೆಯಾದ್ಯಂತ ಎಲ್ಲ ಅಂಗನವಾಡಿ ಮತ್ತು ಶಾಲೆಗಳಿಗೆ ಭೇಟಿ ನೀಡಿ. ಮಕ್ಕಳ ಆರೋಗ್ಯ ತಪಾಸಣೆ ಕೈಗೊಂಡು ಪ್ರಸಕ್ತ ಜುಲೈ ಅಂತ್ಯದವರೆಗೆ 4’ಡಿ’ ಖಾಯಿಲೆಯಿಂದ ಬಳಲುತ್ತಿರುವ 372 ಮಕ್ಕಳನ್ನು ಪತ್ತೆ ಹಚ್ಚಿ, ಈ ಖಾಯಿಲೆಗಳಲ್ಲಿ ಬಹು ಮುಖ್ಯವಾಗಿ 185 ಹೃದಯ ಸಂಬಂಧಿ ಖಾಯಿಲೆ, 26 ಸೀಳು ತುಟಿ, 9 ಹುಟ್ಟು ಕಣ್ಣಿನ ಪೊರೆಯಿರುವ ಮಕ್ಕಳ ಪೈಕಿ 74 ಮಕ್ಕಳಿಗೆ ಈಗಾಗಲೇ ವಿವಿಧ ಮೇಲ್ದರ್ಜೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿದೆ ಹಾಗೂ ಉಳಿದ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್.ಗಾಜಿಗೌಡ್ರ, ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ. ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಉಪವಿಭಾಗಾಧಿಕಾರಿ ಚೆನ್ನಪ್ಪ, ಕೆ.ಸಿ.ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ಆನಂದಸ್ವಾಮಿ ಗಡ್ಡದೇವರಮಠ ಇತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
Social media & sharing icons powered by UltimatelySocial